ವಿಷಯಕ್ಕೆ ಹೋಗು

ಅಗ್ನಿಹೋತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಗ್ನಿಹೋತ್ರ ಸಾಂಪ್ರದಾಯಿಕ ಹಿಂದೂ ಸಮುದಾಯಗಳಲ್ಲಿ ನಿರ್ವಹಿಸಲಾಗುವ ಒಂದು ವೈದಿಕ ಯಜ್ಞ. ಇದನ್ನು ಅಥರ್ವವೇದದಲ್ಲಿ (೧೧:೭:೯) ಉಲ್ಲೇಖಿಸಲಾಗಿದೆ ಮತ್ತು ಯಜುರ್ವೇದ ಸಂಹಿತ ಮತ್ತು ಶತಪಥ ಬ್ರಾಹ್ಮಣದಲ್ಲಿ (೧೨:೪:೧) ವಿವರವಾಗಿ ವರ್ಣಿಸಲಾಗಿದೆ. ಈ ಆಚರಣೆಯ ವೈದಿಕ ರೂಪವನ್ನು ಈಗಲೂ ಕೇರಳನಂಬೂದಿರಿ ಬ್ರಾಹ್ಮಣರಿಂದ ನಿರ್ವಹಿಸಲಾಗುತ್ತದೆ.

ವೈದಿಕ ಪರಂಪರೆಯಲ್ಲಿ ಗೃಹಸ್ಥನಿಗೆ ಉಕ್ತನಾಗಿರುವ ನಿತ್ಯಕರ್ಮ. ಯಾವಜ್ಜೀವವೂ ಅಗ್ನಿಹೋತ್ರ ಮಾಡಬೇಕೆಂದು ಶ್ರುತಿಯಿದೆ. ಇದು ಹವಿರ್ಯಜ್ಞಗಳಲ್ಲಿ ಒಂದು. ತುಪ್ಪ ಅಥವಾ ಹಾಲು ಅಥವಾ ಬೇರೆ ಹವಿಸ್ಸನ್ನು ಬೆಳಗ್ಗೆ ಮತ್ತು ಸಂಜೆ ಹೋಮಾಹುತಿ ಕೊಡುತ್ತ ಸತತವೂ ಅಗ್ನಿಯನ್ನು ನಂದದಂತೆ ಸಂರಕ್ಷಿಸಿಕೊಂಡು ಪೂಜೆ ಮಾಡುವುದು ಇದರ ಮುಖ್ಯಾಂಶ.

ನಿತ್ಯವಿಧಿಯಾದ ಅಗ್ನಿಹೋತ್ರದಲ್ಲಿ ಸೂರ್ಯ ಮತ್ತು ಪ್ರಜಾಪತಿಗಳಿಗೆ ಬೆಳಗ್ಗೆಯೂ ಅಗ್ನಿ ಮತ್ತು ಪ್ರಜಾಪತಿಗಳಿಗೆ ಸಂಜೆಯೂ ಪ್ರಾರ್ಥನಾಮಂತ್ರಗಳಿರುತ್ತವೆ. ಇವನ್ನು ಉಪಸ್ಥಾನಮಂತ್ರಗಳೆನ್ನುತ್ತಾರೆ. ವೈದಿಕಧರ್ಮದಲ್ಲಿ ಹೆಚ್ಚಿನ ಅಸ್ಥೆಯಿದ್ದಾಗ ಅಗ್ನಿಹೋತ್ರ ಮನೆ ಮನೆಯಲ್ಲಿಯೂ ಆಚರಣೆಯಲ್ಲಿತ್ತು. ಈಗಲೂ ಅಗ್ನಿಹೋತ್ರಿಗಳು ನಮ್ಮ ನಾಡಿನಲ್ಲಿ ಕೆಲವರು ಸಿಕ್ಕುತ್ತಾರೆ. ಕೃಷ್ಣಯಜುರ್ವೇದದ ತೈತ್ತಿರೀಯಗಳು ಸಂಹಿತೆ, ಬ್ರಾಹ್ಮಣ, ಅರಣ್ಯಕಗಳಲ್ಲಿ ಈ ವಿಷಯ ವಿಸ್ತಾರವಾಗಿ ಬರುತ್ತದೆ.