ಆಲ್ಬ (ಆಲ್ವ) ಫೆರ್ನಾನ್ಡೊ ಆಲ್ವಾರೆಜ್ ಡ ಟೊಲೇಡೊ, ಡ್ಯೂಕ್ ಡ
1507-1582. ಸ್ಫೇನ್ ದೇಶದ ಸೈನ್ಯಾಧಿಕಾರಿ ಮತ್ತು ರಾಜನೀತಿನಿಪುಣ. ಶ್ರೀಮಂತ ಮನೆತನದಲ್ಲಿ ಹುಟ್ಟಿ ತನ್ನ ಆಯುಷ್ಯವನ್ನೆಲ್ಲ ಕೊಲೆ ಸುಲಿಗೆ ಮುಂತಾದುವುಗಳಲ್ಲಿ ಕಳೆದ ಪ್ರಸಿದ್ಧ ವೀರ. ತನ್ನ ಕಾಲದ ಅತ್ಯಂತ ಮೇಧಾವಿ ಸೈನ್ಯಾಧಿಕಾರಿ ಎನಿಸಿದ್ದ. ತನ್ನ ಸೈನಿಕರಿಗೆ ನೀಡುತ್ತಿದ್ದ ಕಠಿಣ ತರಬೇತಿ ಹಾಗೂ ಶಿಸ್ತು ಪಾಲನೆಯಿಂದಾಗಿ ತಾನು ಹೋದ ಕಡೆಯಲ್ಲೆಲ್ಲ ಜಯ ಗಳಿಸಿದ. ಸಮಯವರಿತು ತನ್ನ ಸೇನೆಯನ್ನು ಸ್ಥಳಾಂತರಿಸಿ ಯುದ್ಧಮಾಡುವುದರಲ್ಲಿ ಈತ ನಿಪುಣ. ಇವನ ಆತ್ಮಪ್ರತ್ಯಯದ ಮುಂದೆ ಯಾವ ಅಧಿಕಾರಿಯೂ ನಿಲ್ಲದೆ ಹೋದ.
1546-47ರಲ್ಲಿ ಈತ ಜರ್ಮನಿಯ ಪ್ರಾಟೆಸ್ಟೆಂಟ್ ರಾಜಕುಮಾರರ ಮೇಲೆ ದಾಳಿ ಮಾಡಿ ಜಯಗಳಿಸಿ ಮೇಲ್ಬರ್ಗನ್ನು ಹಿಡಿದ. ತಾನು ಪಡೆದ ಜಯದ ದ್ಯೋತಕವಾಗಿ ಐದನೆಯ ಚಾರ್ಲ್ಸ್ ನನ್ನು ಅಧಿಕಾರಕ್ಕೆ ತಂದ. ಅನಂತರ ಇಟಲಿ ಸೇನೆಯ ಮುಖ್ಯಾಧಿಕಾರಿಯಾಗಿ ನೇಮಕಗೊಂಡ. ಎರಡನೆಯ ಫಿಲಿಪ್ಸ್ ಪಟ್ಟಕ್ಕೆ ಬಂದಮೇಲೆ ಇವನ ಏರಿಕೆ ಕಾಲ ಆರಂಭಿಸಿತು. ತನ್ನ ಎದುರಾಳಿಗಳನ್ನು ಒಂದಿಲ್ಲೊಂದು ರೀತಿಯಲ್ಲಿ ಸದೆಬಡಿದು ತನ್ನ ಅಧಿಕಾರ ಮೆರೆಯಿಸಿದ. ಕೊನೆಗೆ ಲಿಸ್ಬನ್ ಪಟ್ಟಣವನ್ನು ಹಿಡಿದು ಸುಲಿಗೆ ಮಾಡಿ ಜನರನ್ನು ಹಿಂಸೆಗೆ ಗುರಿಪಡಿಸಿದುದರಿಂದ ಅರಸನ ಕೋಪಕ್ಕೆ ಪಾತ್ರನಾದ. ಪ್ರಾಟೆಸ್ಟೆಂಟ್ ದೇಶಗಳಲ್ಲಿ ಆಲ್ಬನ ಹೆಸರು ಕ್ರೂರತ್ವ ಹಾಗೂ ಧರ್ಮಪೀಡನೆಗೆ ಪ್ರಸಿದ್ಧವಾಗಿದೆಯಾದರೂ ಸ್ಪೇನಿನ ಇತಿಹಾಸದಲ್ಲಿ ಅದಕ್ಕೆ ಹೆಚ್ಚಿನ ಮಹತ್ತ್ವವಿದೆ.
ಉಲ್ಲೇಖಗಳು
[ಬದಲಾಯಿಸಿ]