ವಿಷಯಕ್ಕೆ ಹೋಗು

ಇಲಿಯಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಲಿಯಡ್ ಮಹಾಕಾವ್ಯದ ಒಂದು ದೃಶ್ಯ

ಇಲಿಯಡ್ ಪ್ರಾಚೀನ ಗ್ರೀಕ್ ಮಹಾಕಾವ್ಯಗಳಲ್ಲೊಂದು. ಕಾಲ ಸು. ಕ್ರಿ. ಪೂ. 8ನೆಯ ಶತಮಾನ. ರಚಿಸಿದವ ಹೋಮರ್ ಕವಿ ಎಂದು ಪ್ರತೀತಿಯಿದೆ. ಗ್ರೀಕರಿಗೂ ಟ್ರಾಯ್ ನಗರದವರಿಗೂ ನಡೆದ ಯುದ್ಧದ ವರ್ಣನೆ ಇದರ ವಸ್ತು. ಆ ಯುದ್ಧದ ಕಡೆಯ ದಿನಗಳ ಘಟನೆಗಳು ಇದರಲ್ಲಿ ನಿರೂಪಿತವಾಗಿವೆ. ಗ್ರೀಕರ ಅಗ್ರವೀರ ಅಕಿಲೀಸ್ ತಾನು ಯುದ್ಧ ಮಾಡುವುದಿಲ್ಲವೆಂದು ಹೇಳಿ ಬೇರೆಯಾಗಿ ನಿಂತುದರ ಪರಿಣಾಮವಾಗಿ ಗ್ರೀಕರಿಗಾದ ಅನಾಹುತಗಳಲ್ಲೂ ಇದರ ಬಹುಭಾಗವನ್ನು ತೆಗೆದುಕೊಂಡಿವೆ. ಇದರಲ್ಲಿರುವುದು ಒಟ್ಟು ಇಪ್ಪತ್ತನಾಲ್ಕು ಕಾಂಡಗಳು.

ಅಕಿಲಿಯಸ್ ಬಾಣದಿಂದ ಗಾಯಗೊಂಡ ಪ್ಯಾಟ್ರೊಕ್ಲಸ್ ಅನ್ನು ಉಪಚರಿಸುತ್ತರುವುದು.(ಹೂದಾನಿಗಳ ಮೇಲ್ಭಾಗದ ಶಾಸನಗಳಿಂದ ತೆಗೆದುಕೊಂಡಿದೆ. ca. 500 ಕ್ರಿ.ಪೂ. ವಲ್ಸಿಯಿಂದ.F2278

ಇಲಿಯಡ್ ಷಟ್ಪದಿಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊಂಡಿದೆ. ನಂತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿಂಗಡಿಸಿದರು.

ಇಲಿಯಡ್ ಮತ್ತು ಹೋಮರನ ಇನ್ನೊಂದು ಮಹಾಕಾವ್ಯವಾದ "ಒಡಿಸ್ಸಿ" ಪ್ರಾಚೀನ ಗ್ರೀಕ್ ಕಾವ್ಯದ ಪ್ರಧಾನ ಕೃತಿಗಳೆಂದು ಹೇಳಲಾಗುತ್ತದೆ. ಹೋಮರ್ ಕವಿ ನಿಜವಾದ ವ್ಯಕ್ತಿಯೇ ಅಲ್ಲವೇ, ಅಥವಾ ಹೋಮರ್ ಒಬ್ಬನೇ ವ್ಯಕ್ತಿಯೋ ಅನೇಕ ವ್ಯಕ್ತಿಗಳೋ ಮೊದಲಾದ ಚರ್ಚೆಗಳು ಅನೇಕ ವರ್ಷಗಳಿಂದ ನಡೆದಿವೆ.

ಇಲಿಯಡ್ ನ ಕಥೆ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವಿನ ಯುದ್ಧವೊಂದರ ಹತ್ತನೆ ಮತ್ತು ಕೊನೆಯ ವರ್ಷದ ಘಟನೆಗಳನ್ನು ಕುರಿತದ್ದು. ಮುಖ್ಯವಾಗಿ ಅಕೀಲೀಸ್ ಎಂಬ ಗ್ರೀಕ್ ವೀರನ ಸಾಹಸಗಳನ್ನು ತಿಳಿಸುತ್ತದೆ. ಅಕೀಲೀಸ್ ಮತ್ತು ಅಗಮೆಮ್ನಾನ್ ರ ನಡುವಿನಾ ಜಗಳದೊಂದಿಗೆ ಆರಂಭಗೊಂಡು, ಹೆಕ್ಟರ್ ಎಂಬ ಟ್ರಾಯ್ ದೇಶದ ವೀರನ ಮರಣ ಮತ್ತು ಅಂತ್ಯಸಂಸ್ಕಾರದೊಂದಿಗೆ ಕಾವ್ಯ ಕೊನೆಗೊಳ್ಳುತ್ತದೆ.

ಟ್ರಾಯ್ ನಗರದ ರಾಜ ಪ್ರಯಮನ ಮಗ ಪ್ಯಾರಿಸ್ ಗ್ರೀಸಿನ ಸ್ಪಾರ್ಟಾದ ಮೆನೆಲಾಸನ ಪತ್ನಿ ಪರಮ ಸುಂದರಿ ಹೆಲೆನಳನ್ನು ಎತ್ತಿಕೊಂಡು ಹೋದುದು ತಮ್ಮ ನಾಡಿಗೇ ಆದ ಅಪಮಾನವೆಂದು ಕೆರಳಿದ ಗ್ರೀಕ್ ರಾಜರು ತಮ್ಮ ತಮ್ಮ ಯೋಧರೊಡನೆ ನೂರಾರು ಹಡಗುಗಳಲ್ಲಿ ಈಜಿಯನ್ ಸಮುದ್ರವನ್ನು ದಾಟಿ ಏಷ್ಯ ಮೈನರಿನ ವಾಯವ್ಯಮೂಲೆಯಲ್ಲಿ ಕಡಲತೀರಕ್ಕೆ ಮೂರು ಮೈಲಿ ದೂರದಲ್ಲಿದ್ದ ಟ್ರಾಯ್ ಕೋಟೆಗೆ ಮುತ್ತಿಗೆ ಹಾಕಿದರು. ಟ್ರಾಯ್ ಜನ (ಟ್ರೋಜನರು) ಕೋಟೆಯ ಬಾಗಿಲನ್ನು ಭದ್ರಪಡಿಸಿ ಒಂಬತ್ತು ವರ್ಷ ಕಳೆದರೂ ಅಲ್ಲಾಡಲಿಲ್ಲ. ಅಷ್ಟು ಕಾಲವೂ ಗ್ರೀಕರು ಸುತ್ತಮುತ್ತಲ ಸಣ್ಣಪುಟ್ಟ ರಾಜ್ಯಗಳಿಗೆ ಮುತ್ತಿಗೆ ಹಾಕಿ ಅವನ್ನು ಗೆದ್ದು ಅಲ್ಲಿನವರನೇಕರನ್ನು ಸೆರೆಯಾಳುಗಳಾಗಿಯೂ, ದಾಸಿಯರಾಗಿಯೂ ಹಿಡಿದು ತಂದರು. ಅಂಥವರಲ್ಲಿ ಒಬ್ಬಳು ಅಕಿಲೀಸನ ದಾಸಿ ಬ್ರಿಸೇಯಿಸ್, ಬ್ರೈಸಿಸ್ ಎಂಬುವನ ಮಗಳು. ಗ್ರೀಕರ ಪ್ರಧಾನ ಸೇನಾಪತಿ ಮೆನೆಲಾಸನ ತಮ್ಮ ಆಗಮೆಮ್ನಾನ್‍ನ ದಾಸಿ ಕ್ರಿಸೇಯಿಸ್ ಕ್ರೈಸಿಸನ ಮಗಳು ಇನ್ನೊಬ್ಬಳು. ಕ್ರೈಸೀಸ್ ಅಪೊಲೊ ದೇವನ ಪೂಜಾರಿ, ಅವನು ತನ್ನ ಮಗಳಿಗುಂಟಾದ ಪಾಡನ್ನು ನೋಡಿ ಆ ದೇವತೆಗೆ ಮೊರೆಯಿಡಲು, ಗ್ರೀಕರನ್ನು ಶಿಕ್ಷಿಸುವ ಸಲುವಾಗಿ ಅಪೊಲೊ ವ್ಯಾಧಿಯೊಂದನ್ನು ಗ್ರೀಕ್ ಸೈನಿಕರಲ್ಲಿ ಹರಡಿದ. ಕಾಲ್ಟಾಸ್ ಎಂಬ ದಿವ್ಯಜ್ಞಾನಿಯಿಂದ ಈ ಪಿಡುಗಿಗೆ ಕಾರಣವನ್ನು ತಿಳಿದುಕೊಂಡ ಗ್ರೀಕರು ಕ್ರಿಸೇಯೀಸಳನ್ನು ಅವಳ ತಂದೆಗೆ ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದರು. ಹಾಗೆ ಮಾಡಲೇಬೇಕಾಗಿ ಬಂದಾಗ ಆಗಮೆಮ್ನಾನ್ ತನ್ನ ದಾಸಿ ಹೋದುದರಿಂದ ಅವಳಿಗೆ ಬದಲಾಗಿ ಅಕಿಲೀಸನ ದಾಸಿಯನ್ನು ಬಲವಂತವಾಗಿ ತಂದಿಟ್ಟುಕೊಂಡ. ಇದರಿಂದ ಅಸಮಾಧಾನಗೊಂಡ ಅಕಿಲೀಸ್ ತಾನು ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿ ತನ್ನ ಅನುಯಾಯಿಗಳಾದ ಮಿರ್ ಮಿಡನ್ನರನ್ನು ಕರೆದುಕೊಂಡು ದೂರನಿಂತ. ಅಕಿಲೀಸನ ತಾಯಿ ಥೆಟಿಸ್ ಎಂಬ ದೇವತೆ. ಅವಳು ತನ್ನ ಮಗನಿಗಾದ ಅಪಮಾನವನ್ನು ಕಂಡು ದುಃಖಿತಳಾಗಿ ದೇವಾಧಿದೇವ ಜ್ಯೂಸನ ಬಳಿಗೆ ಹೋಗಿ ದೂರಿತ್ತಳು. ಗ್ರೀಕರು ಅಕಿಲೀಸನ ಹಿರಿಮೆಯನ್ನು ಅರಿತುಕೊಳ್ಳುವಂತೆ ಮಾಡುವುದಾಗಿ ಜ್ಯೂಸ್ ಮಾತುಕೊಟ್ಟ. ಈ ದಾಸಿಯರ ಪ್ರಸಂಗ ಇಲಿಯಡ್‍ನ ಮೊದಲ ಕಾಂಡದ ಕಥೆ.

ಗ್ರೀಕರಿಗೆ ಅಕಿಲೀಸನ ಔನ್ನತ್ಯದ ಅರಿವಾಗಬೇಕಾದರೆ ಯುದ್ಧ ಆರಂಭವಾಗಬೇಕು. ಆದ್ದರಿಂದ ಎರಡನೆ ಕಾಂಡದಲ್ಲಿ ಜ್ಯೂಸ್ ಆಗಮೆಮ್ನಾನಿಗೊಂದು ಕನಸನ್ನು ಕಳುಹಿಸಿ ಯುದ್ಧ ಮಾಡಬೇಕೆಂದು ಸೂಚಿಸುತ್ತಾನೆ. ಆಗಮೆಮ್ನಾನ್ ತನ್ನ ಜನರನ್ನು ಪರೀಕ್ಷಿಸಲು ತಾವೆಲ್ಲ ಸ್ವದೇಶಕ್ಕೆ ಹಿಂದಿರುಗಬೇಕೆಂದು ಹೇಳುತ್ತಾನೆ. ತಕ್ಷಣ ಅವರೆಲ್ಲ ಸಂತೋಷದಿಂದ ಹಡಗುಗಳ ಕಡೆಗೆ ಓಡುತ್ತಾರೆ. ಒಡಿಸ್ಸಿಯಸ್ ಅವರನ್ನು ಹಿಂದಕ್ಕಟ್ಟುತ್ತಾನೆ. ಈ ಸಂದರ್ಭದಲ್ಲಿ ಗ್ರೀಕ್ ಹಡಗುಗಳನ್ನೂ ಗ್ರೀಕ್ ಸೈನ್ಯದ ಪ್ರಮುಖರನ್ನೂ ಕುರಿತ ವಿವರಗಳು ಬರುತ್ತವೆ. ಮೂರನೆಯ ಕಾಂಡದಲ್ಲಿ ಹೆಲೆನಳನ್ನು ಹಾರಿಸಿಕೊಂಡು ಬಂದು ಯುದ್ಧಕ್ಕೆ ಕಾರಣನಾಗಿದ್ದ ಪ್ಯಾರಿಸ್ ಅವಳ ಪತಿ ಮೆನೆಲಾಸ್‍ನೊಡನೆ ದ್ವಂದ್ವಯುದ್ಧದಲ್ಲಿ ತೊಡಗಿ ಸಾಯುತ್ತಾನೆ. ಅವನು ಸಾಯುವ ವೇಳೆಗೆ ಅವನ ಪಕ್ಷಪಾತಿಯಾದ ಸೌಂದರ್ಯಾಧಿದೇವತೆ ಆಫ್ರೋಡಿಟಿ ಅವನನ್ನು ಯುದ್ಧಭೂಮಿಯಿಂದ ಕರೆದೊಯ್ಯುತ್ತಾಳೆ. ನಾಲ್ಕನೆಯ ಕಾಂಡದಲ್ಲಿ ಗ್ರೀಕರ ಪರವಾಗಿರುವ ಅಥೀನದೇವಿ ಟ್ರಾಯ್ ಪಕ್ಷದ ಪ್ಯಾಂಡರಸ್ ಎಂಬಾತನನ್ನು ಮೆನಲಾಸನಿಗೆ ಗುರಿಯಿಟ್ಟು ಬಾಣಪ್ರಯೋಗ ಮಾಡುವಂತೆ ಪ್ರೇರಿಸಿ ಎರಡು ಸೈನ್ಯಗಳಿಗೂ ಮತ್ತೆ ಯುದ್ಧ ಆರಂಭವಾಗುವಂತೆ ಮಾಡುತ್ತಾಳೆ. ಐದನೆ ಕಾಂಡದಲ್ಲಿ ಗ್ರೀಕರ ಡಿಯೋಮಿಡಿಸ್ ವೀರಾವೇಶದಿಂದ ಹೋರಾಡಿ ಪ್ಯಾಂಡರಸನ್ನೂ ಇನ್ನಿತರ ಅನೇಕ ಟ್ರೋಜನರನ್ನೂ ಕೊಲ್ಲುತ್ತಾನೆ. ಟ್ರೋಜನರಿಗೆ ಸಹಾಯ ಮಾಡುವ ಆಫ್ರೋಡಿಟಿ ಮತ್ತು ಐರಿಸ್ ದೇವತೆಗಳೂ ಅವನ ಆಯುಧಗಳ ಸವಿಗಾಣದೆ ಹೋಗುವುದಿಲ್ಲ.

ಆರನೆಯ ಕಾಂಡದಲ್ಲಿ ಟ್ರಾಯ್‍ನ ಹಿರಿಯ ರಾಜಕುಮಾರ ಹೆಕ್ಟರ್ ಟ್ರಾಯ್ ನಗರದವರೆಲ್ಲ ಅಥೀನಳಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಸಲಹೆಕೊಟ್ಟು ತನ್ನ ಹೆಂಡತಿ (ಆಂಡ್ರೊಮೆಕೆ) ಮತ್ತು ಪುಟ್ಟಮಗುವನ್ನು ಮನಕರಗುವಂಥ ಸನ್ನಿವೇಶವೊಂದರಲ್ಲಿ ಭೇಟಿ ಮಾಡಿ ಬೀಳ್ಕೊಂಡು ಸಮರಭೂಮಿಗೆ ತೆರಳುತ್ತಾನೆ.

ಏಳನೆ ಕಾಂಡದಲ್ಲಿ ಟ್ರೋಜನ್ ವೀರ ಹೆಕ್ಟರನಿಗೂ ಗ್ರೀಕರ ಕಡೆಯ ಏಜ್ಯಾಕ್ಸ್‍ಗೂ ಕಾಳಗ ನಡೆಯುತ್ತದೆ.

ದೇವತೆಗಳು ಯಾರೂ ಯುದ್ಧದಲ್ಲಿ ಭಾಗವಹಿಸಕೂಡದೆಂದು ಜ್ಯೂಸ್ ಅಪ್ಪಣೆ ಮಾಡುತ್ತಾನೆ (ಎಂಟನೆ ಕಾಂಡ). ಹೀರಾ ಮತ್ತು ಅಥೀನ ದೇವಿಯರು ಮೊದಮೊದಲು ಇದನ್ನು ಒಪ್ಪದೆ ಇದ್ದರೂ ಆಮೇಲೆ ಸುಮ್ಮನಾಗುತ್ತಾರೆ. ಯುದ್ಧ ಗ್ರೀಕರಿಗೆ ಪ್ರತಿಕೂಲವಾಗಿ ತಿರುಗುತ್ತದೆ.

ತತ್ಕಾರಣ (ಒಂಬತ್ತನೆ ಕಾಂಡದಲ್ಲಿ) ಆಗಮೆಮ್ನಾನ್ ಬ್ರಿಸೇಯಿಸಳನ್ನು ಅಕಿಲೀಸಿಗೆ ಹಿಂದಕ್ಕೆ ಕೊಟ್ಟುಬಿಡುವುದಾಗಿಯೂ ಜೊತೆಗೆ ಬೇರೆ ಉಡುಗೊರೆಗಳನ್ನು ಕೊಡುವುದಾಗಿಯೂ ಹೇಳಿಕಳುಹಿಸುತ್ತಾನೆ. ಅಕಿಲೀಸ್ ಈ ಸಂಧಾನಕ್ಕೆ ಒಪ್ಪದೆ ಕೋಪದಿಂದ ಸಿಡಿದೆದ್ದು ಮಾರನೆಯ ದಿನವೇ ಸ್ವದೇಶಕ್ಕೆ ಮರುಳುವುದಾಗಿ ಶಪಥ ಮಾಡುತ್ತಾನೆ.

ಹತ್ತನೆಯ ಕಾಂಡದಲ್ಲಿ ಒಡಿಸ್ಸಿಯಸ್ ಮತ್ತು ಡಿಯೊಮೀಡರು ಟ್ರಾಯ್ ಸೈನ್ಯವ್ಯೂಹದಲ್ಲಿ ಗೂಢಚರ್ಯೆ ನಡೆಸಿ ಆ ಕಡೆಯ ಕೆಲವರನ್ನು ಸಂಹರಿಸುತ್ತಾರೆ.

ಹನ್ನೊಂದನೆ ಕಾಂಡದಲ್ಲಿ ಆಗಮೆಮ್ನಾನ್, ಒಡಿಸ್ಸಿಯಸ್, ಡಿಯೊಮೀಡಿಸ್ ಮೊದಲಾದವರು ಗಾಯಗೊಳ್ಳುತ್ತಾರೆ. ಅಕಿಲೀಸ್ ಯುದ್ಧ ಹೇಗೆ ಸಾಗುತ್ತದೆಯೆಂದು ನೋಡಿಬರಲು ತನ್ನ ಆಪ್ತ ಸ್ನೇಹಿತ ಪೆಟ್ರಾಕ್ಲಸನನ್ನು ಕಳುಹಿಸಿಕೊಡುತ್ತಾನೆ. ವೃದ್ಧ ನೆಸ್ಟರ್ ಅಕಿಲೀಸ್ ಯುದ್ಧಕ್ಕೆ ಬರುವಂತೆ ಮಾಡಬೇಕೆಂದೂ ಅದಿಲ್ಲದಿದ್ದರೆ ತನ್ನ ಇತರ ಯೋಧರೊಡನೆ ಪೆಟ್ರಾಕ್ಲಿಸನನ್ನಾದರೂ ಕಳುಹಿಸಿಕೊಡಬೇಕೆಂದೂ ಸೂಚಿಸುತ್ತಾನೆ.

ಹನ್ನೆರಡರಿಂದ ಹದಿನಾರನೆ ಕಾಂಡಗಳವರೆಗೂ ಯುದ್ಧದಲ್ಲಿ ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಜಯ ಲಭಿಸುತ್ತದೆ. ಜ್ಯೂಸನ ಆಜ್ಞೆಗೆ ವಿರೋಧವಾಗಿಯೇ ದೇವತೆಗಳು ತಮತಮಗೆ ಬೇಕಾದವರಿಗೆ ಸಹಾಯವೆಸಗುತ್ತಾರೆ. ಕೊನೆಗೆ ಹೆಕ್ಟರ್ ನುಗ್ಗಿ ಬಂದು ಗ್ರೀಕರ ನಾವೆಗಳಿಗೆ ಬೆಂಕಿಯಿಡಲು ಯತ್ನಿಸುತ್ತಾನೆ. ಪೆಟ್ರಾಕಿಸ್ ಅಕಿಲೀಸನನ್ನು ಯುದ್ಧಕ್ಕೆ ಬರಬೇಕೆಂದು ಬೇಡಿಕೊಳ್ಳುತ್ತಾನೆ. ಅಕಿಲೀಸ್ ತಾನು ಹೋಗಲು ಈಗಲು ಇಷ್ಟಪಡುವುದಿಲ್ಲ. ತನ್ನ ಯುದ್ಧ ಕವಚವನ್ನು ಗೆಳೆಯನಿಗೆ ಕೊಟ್ಟು ಅದನ್ನು ಧರಿಸಿಹೋಗಿ ಟ್ರೋಜನರನ್ನು ಹಿಂದಕ್ಕೆ ಬರಬೇಕೆಂದು; ಪೆಟ್ರಾಕ್ಲಿಸನಿಗೆ ಹೇಳುತ್ತಾನೆ. ಅಕಿಲೀಸನ ಕವಚವನ್ನು ಧರಿಸಿ ಹೋಗುವ ಪೆಟ್ರಾಕ್ಲಿಸ್ ಟ್ರೋಜನರನ್ನು ಟ್ರಾಯ್ ಕೋಟಿಯವರೆಗೂ ಅಟ್ಟಿಸಿಕೊಂಡು ಹೋಗುತ್ತಾನೆ. ಅಲ್ಲಿ ಅವನು ಹೆಕ್ಟರಿನಿಂದ ಹತನಾಗುತ್ತಾನೆ. (16ನೆಯ ಕಾಂಡ).

ಅಕಿಲೀಸ್ ಪ್ಯಾಟ್ರೋಕ್ಲಸ್ನ ಮರಣವನ್ನು ನೋಡಿ ದುಃಖಿಸುತ್ತಿರುವುದು;(1855) ರಷ್ಯಾದ ವಾಸ್ತವವಾದಿ ನಿಕೊಲಾಯ್ ಜಿ--Nikolay Ge 002

ಹದಿನೇಳನೆಯ ಕಾಂಡದಲ್ಲಿ ಹೆಕ್ಟರ್ ಅಕಿಲೀಸನ ಕವಚವನ್ನು ಕಿತ್ತಿಟ್ಟುಕೊಳ್ಳುತ್ತಾನೆ. ಅವನ ಮೃತ ದೇಹವನ್ನು ಮೆನೆಲಾಸ್ ಮೊದಲಾದವರು ಕಷ್ಟಪಟ್ಟು ಉಳಿಸಿಕೊಂಡು ಹೋಗುತ್ತಾರೆ. ಗೆಳೆಯನಿಗಾದ ದುರಂತವನ್ನು ಕಂಡು ಕೋಪೋದ್ರಕ್ತನಾಗುವ ಅಕಿಲೀಸ್ ಸೇಡು ತೀರಿಸಿಕೊಳ್ಳಲೆಂದು ಸಮರಕ್ಕಿಳಿಯುತ್ತಾನೆ. ಈಗ ಹೆಕ್ಟರನ ವಶವಾಗಿರುವ ಅವನ ಕವಚಕ್ಕೆ ಬದಲಾಗಿ ದೇವತೆಗಳ ಕಮ್ಮಾರ ಹೆಫೀಸ್ಟ್ಸ್ ಅವನಿಗೊಂದು ಹೊಸ ಗುರಾಣಿಯನ್ನೂ ಇತರ ಆಯುಧಗಳನ್ನೂ ಮಾಡಿಕೊಡುತ್ತಾನೆ. ಆ ಗುರಾಣಿಯ ಮೇಲೆಲ್ಲ ಗ್ರೀಕರ ಜೀವನದ ಚಿತ್ರಗಳು ವಿಪುಲವಾಗಿ ಚಿತ್ರಿತವಾಗಿರುತ್ತದೆ. ಅವನ್ನು ಧರಿಸಿ ಅಕಿಲೀಸ್ (ತಾನು ಅಲ್ಪಾಯು ಎಂಬ ಭವಿಷ್ಯವಾಣಿಯಿದ್ದರೂ ಲೆಕ್ಕಿಸದೆ) ಮುಂದೆ ನುಗ್ಗಿ ಯುದ್ಧದ ಕಣವನ್ನು ಹೊಕ್ಕು ಹೋರಾಡತೊಡಗುತ್ತಾನೆ. ಅವನಿಲ್ಲದೆ ಗ್ರೀಕರಿಗೆ ಜಯ ದೊರೆಯಕೂಡದೆಂದು ಜ್ಯೂಸ್ ಥೆಟಿಸಳಿಗಿತ್ತಿದ್ದ ಮಾತು ಈಗ ಸತ್ಯವಾಗುತ್ತದೆ. ಜ್ಯೂಸ್ ದೇವನೆ ಈಗ ಒಂದು ಪಕ್ಷ ವಹಿಸುವುದರಿಂದ ಇತರ ಸ್ತ್ರೀಪುರುಷ ದೇವತೆಗಳೆಲ್ಲ ತಮಗೆ ಬೇಕಾದ ಕಡೆ ಸೇರಿ ಬೇಕಾದವರಿಗೆ ಸಹಾಯ ಮಾಡುತ್ತಾರೆ (21ನೆಯ ಕಾಂಡ).

ಅಕಿಲೀಸ್ ಟ್ರೋಜನ್ ಸೈನಿಕರನ್ನು ಮಟ್ಟಹಾಕುತ್ತಾನೆ (21ನೆಯ ಕಾಂಡ). ಇಪ್ಪತ್ತೆರಡನೆಯ ಕಾಂಡದಲ್ಲಿ ಹೆಕ್ಟರ್ ಟ್ರಾಯ್ ಕೋಟೆಯ ಗೋಡೆಯ ಬಳಿ ಕಾದು ನಿಂತಿರುತ್ತಾನೆ. ಅಲ್ಲಿಗೆ ಬರುವ ರೋಷಭೀಷಣನಾದ ಅಕಿಲೀಸನನ್ನು ನೋಡಿ ಅವನು ಕಾಲುಕೀಳುತ್ತಾನೆ. ಅದರಿಂದ ಪ್ರಯೋಜನವಾಗುವುದಿಲ್ಲ. ಕಡೆಗೆ ಆತ ಅಕಿಲೀಸನ ಆಯುಧಕ್ಕೆ ತುತ್ತಾಗಿ ಸತ್ತುಬೀಳುತ್ತಾನೆ. ಅವನ ಶವವನ್ನು ತನ್ನ ರಥದ ಗಾಲಿಗೆ ಕಟ್ಟಿ ಮಣ್ಣಿನಲ್ಲಿ ಎಳೆದುಕೊಂಡು ಅಕಿಲೀಸ್ ತನ್ನ ಬಿಡಾರಕ್ಕೆ ಧಾವಿಸುತ್ತಾನೆ. ಹೆಕ್ಟರನ ನೆಂಟರಿಷ್ಟರ ದುಃಖ ಉಕ್ಕಿಬರುತ್ತದೆ.

ಇಪ್ಪತ್ತಮೂರನೆಯ ಕಾಂಡದಲ್ಲಿ ಅಕಿಲೀಸ್ ಪೆಟ್ರಾಕ್ಲಿಸನ ಮೃತದೇಹದ ದಹನ ಮಾಡುತ್ತಾನೆ. ಅದರೊಡನೆ ಹನ್ನೆರಡು ಮಂದಿ ಟ್ರೋಜನ್ ಯುವಕರನ್ನು ಸುಡುತ್ತಾನೆ.

ಆದರೆ (24ನೆ ಕಾಂಡ) ಹೆಕ್ಟರನ ದೇಹಕ್ಕೆ ಅವನು ಅತ್ಯಂತ ಅಗೌರವವನ್ನು ತೋರಿಸಲು ಜ್ಯೂಸ್ ಥೆಟೆಸಳನ್ನು ಕಳುಹಿಸಿ ಹೀಗೆ ಮಾಡಿದರೆ ಅವನು ದೇವತೆಗಳ ಕೋಪಕ್ಕೆ ಪಾತ್ರನಾಗಬೇಕಾಗುವುದೆಂದು ಹೇಳಿಕಳಿಸುತ್ತಾನೆ. ಹೆಕ್ಟರನ ಮುದಿ ತಂದೆ ಪ್ರಿಯಮ್ ಮಗನ ದೇಹವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ರಾತ್ರಿಯ ಕತ್ತಲಲ್ಲಿ ಅಕಿಲೀಸನ ಬಿಡಾರಕ್ಕೆ ಬರುತ್ತಾನೆ. ಅವನ್ನು ಕಂಡು ಮರುಕದಿಂದ ಕರಗುವ ಅಕಿಲೀಸ್ ಹೆಕ್ಟರನ ದೇಹವನ್ನು ಹಿಂದಕ್ಕೆ ಕೊಡಲು ಒಪ್ಪುವುದಲ್ಲದೆ ಹೆಕ್ಟರನ ಉತ್ತರಕ್ರಿಯೆಗಳೆಂದು ಕೆಲದಿನ ಯುದ್ಧ ನಿಲ್ಲಿಸುತ್ತಾನೆ. ಹೇಗೆ ಅಕಿಲೀಸನ ಹಿರಿಮೆ ಸ್ಥಾಪಿತವಾಗುತ್ತದೆ.

ಇದು ಇಲಿಯಡ್ ಕಾವ್ಯದ ಕಥೆ.

ಕಾವ್ಯ ಮತ್ತು ವಾಸ್ತವ

[ಬದಲಾಯಿಸಿ]

ಇಲಿಯಡ್ ಎಂಬುದು ಟ್ರಾಯ್‍ನ ಇನ್ನೊಂದು ಹೆಸರಾದ ಇಲಿಯಮ್‍ನಿಂದ ಬಂದುದು (ಇಲ್ಲಸ್ ಎಂಬುವನು ಅದರ ಸ್ಥಾಪಕನೆಂಬ ನಂಬಿಕೆಯಿತ್ತು. ಇಲಿಯಮ್‍ನಲ್ಲಿ ಅವನ ಹೆಸರಿನ ಸೂಚನೆಯಿದೆ). ಟ್ರೋಜನ್ ಯುದ್ಧ ವಾಸ್ತವವಾಗಿ ನಡೆಯಿತೆಂಬುದಕ್ಕೆ ಭೂ ಸಂಶೋಧಕರಿಗೆ ರುಜುವಾತು ಸಿಕ್ಕಿದೆ. ಕ್ರಿ.ಪೂ. 12ನೆಯ ಶತಮಾನದಲ್ಲಿ ಗ್ರೀಕರಿಗೂ ಟ್ರಾಯ್ ಜನಕ್ಕೂ ಒಂದು ನಿಜವಾದ ಯುದ್ಧ ನಡೆದಿರಬೇಕು;. ಅದರ ಯೋಧರ ಮತ್ತು ವೀರರ ವಿಚಾರವಾಗಿ ಅನೇಕಾನೇಕ ಕಥೆಗಳು ಹುಟ್ಟಿಕೊಂಡು ಬೆಳೆದಿರಬೇಕು. ಕ್ರಿ. ಪೂ. ಎಂಟನೆ ಶತಮಾನದ ಹೊತ್ತಿಗೆ ಇಂಥ ನೂರಾರು ಕಥೆ, ಕವನಗಳು ಜನಗಳಲ್ಲಿ ಬಾಯಿಂದ ಬಾಯಿಗೆ ಹಬ್ಬಿ ಪ್ರಚಾರವಾಗಿದ್ದಿರಬೇಕು. ಹೋಮರ್ ಎಂಬ ಕವಿ ಅವನ್ನು ಸಂಗ್ರಹಿಸಿ ಅವಕ್ಕೆ ಪರಸ್ಪರ ಸಂಬಂಧವನ್ನು ಕಲ್ಪಿಸಿ ಅವನ್ನು ಜೋಡಿಸಿ ಪರಿಷ್ಕರಿಸಿ ಇಲಿಯಡ್ ಕಾವ್ಯವಾಗಿ ಹೆಣೆದಿರಬೇಕು.

ಕಾವ್ಯದ ವಸ್ತು, ವಿಮರ್ಶೆ,ಮೌಲ್ಯಾಂಕನ

[ಬದಲಾಯಿಸಿ]

ಈ ಮಹಾಕಾವ್ಯದ ಪ್ರಾರಂಭದ ಪಂಕ್ತಿಗಳೇ ಹೇಳುವಂತೆ ಇದರ ವಸ್ತು 'ಅಕಿಲೀಸನ ಕ್ರೋಧ. ಸತ್ತ ಮಹಾವೀರ ಹೆಕ್ಕಡನ ಶವವನ್ನು ರಥಕ್ಕೆ ಕಟ್ಟಿ ಪ್ರತಿ ಬೆಳಗೂ ಅಕಿಲೀಸ್ ಅದನ್ನು ಮಣ್ಣಿನಲ್ಲಿ ಎಳೆಯುತ್ತಾನೆ. ಕ್ರೋಧವು ಮನುಷ್ಯನನ್ನು ಹೇಗೆ ಮೃಗವನ್ನಾಗಿ ಮಾಡಿ ಬಿಡುವುದೆಂಬ ಚಿತ್ರ ಇಲ್ಲಿದೆ. ಪ್ರಿಯತಮೆ ಅಕಿಲೀಸನ ಗುಡಾರಕ್ಕೆ ಬಂದು ಮಗನ ದೇಹವನ್ನು ಬೇಡುವುದು ಜಗತ್ತಿನ ಸಾಹಿತ್ಯದ ಮರೆಯಲಾಗದ ದೃಶ್ಯಗಳಲ್ಲಿ ಒಂದು. ಅಕಿಲೀಸ್ ಕರಗಿ ಹೋಗಿ, ಪಶುವಾಗಿದ್ದವನು ಮತ್ತೆ ಮನುಷ್ಯನಾಗುತ್ತಾನೆ. ಹೆಕ್ಟರ್ ತನ್ನ ಹೆಂಡತಿಯನ್ನೂ ಮಗುವನ್ನು ನೋಡುವುದು, ಹೆಲೆನ್ ಹೆಕ್ಟರನ ಶವದ ಬಳಿ ದುಃಖಿಸುವುದು ಭಾವಾತಿರೇಕವಿಲ್ಲದೆ ಹೃದಯವನ್ನು ಮುಟ್ಟುವ ದೃಶ್ಯಗಳು.

ಈ ಮಹಾಕಾವ್ಯದಲ್ಲಿ ದೇವತೆಗಳ ಚಿತ್ರಣವೂ ಇದೆ. ಬಹುಮಟ್ಟಿಗೆ, ಈ ದೇವತೆಗಳಿಗಿಂತ ಬಹುಮಂದಿ ಮನುಷ್ಯನೇ ಉದಾತ್ತರಾಗಿ, ಗೌರವಾರ್ಹರಾಗಿ ಕಾಣುತ್ತಾರೆ. ದೇವತೆಗಳು ಅಮರರು, ಶಕ್ತಿಶಾಲಿಗಳು, ಅದರಿಂದ ಮನುಷ್ಯರು ಅವರಿಗೆ ತಲೆ ಬಾಗಿ ನಡೆಯಬೇಕು. ಇಲ್ಲಿ ಮನುಷ್ಯನ ಜಗತ್ತಿನ ಅತ್ಯುನ್ನತ ಮೌಲ್ಯಗಳು ಸಾಹಸ ಮತ್ತು ವೀರನೆಂಬ ಶುಭ್ರ ಯಶಸ್ಸು ಇಲ್ಲಿ ಕವಿ ಸುಮಾರು ಕ್ರಿ.ಪೂ. 11-12ನೆಯ ಶತಮಾನದ ಕಂಚಿನ ಯುಗವನ್ನು ಚಿತ್ರಿಸುತ್ತಿದ್ದಾನೆ, ಇದೊಂದು ವೀರಯುಗ.

ಹೋಮರನ ಮಹಾಕಾವ್ಯಗಳು ಯೂರೋಪಿನ ಮಹಾಕಾವ್ಯ ಪರಂಪರೆಯನ್ನು ಪ್ರಾರಂಭಿಸಿದವು. ಮಹಾಕಾವ್ಯವು ತನ್ನ (ನಾಯಕನ) ಯುಗದ ಮೌಲ್ಯಗಳ ಸಾಕಾರಮೂರ್ತಿಯಾದ ಅಪ್ರತಿಮ ವೀರನ ಸುತ್ತ ಬೆಳೆದ ದೀರ್ಘ ಕಥೆಯಾಯಿತು, ಮಾನವಾತೀತಿ ಜಗತ್ತು ಇದರಲ್ಲಿ ಸೇರಿಕೊಂಡಿತು, ಇಡೀ ಕಾವ್ಯ ಒಂದು ಮಹತ್ತರ ಘಟನೆಯ ಸುತ್ತ ರೂಪ ತಾಳಿತು, ಹಿನ್ನೋಟದ ಕಥನ (ರಿಟ್ರಾಸ್ಪೆಕ್ಟಿನ್ ನ್ಯಾರೇಷನ್) ಕಥನ ತಂತ್ರದ ಭಾಗವಾಯಿತು. ಮಹೋಪಮೆಯನ್ನು ಮೊದಲು ಬಳಸಿದವನು ಹೋಮರ್, ಆದುದರಿಂದ ಇದಕ್ಕೆ 'ಹೋಮೆರಿಕ್ ಸಿಮಿಲಿ ಎಂದೂ ಹೆಸರು.

ಪಾಶ್ಚಾತ್ಯ ವಿಮರ್ಶಕರು ಮಹಾಕಾವ್ಯಗಳಲ್ಲಿ ಎರಡು ಬಗೆ ಎನ್ನುತ್ತಾರೆ. ಮೊದಲನೆಯದು 'ಪ್ರೈಮರಿ ಎಪಿಕ್. ಇದಕ್ಕೆ ಮಾದರಿ ಇಲ್ಲಿ, ಇದೇ ಮುಂದಿನ ಮಹಾಕಾವ್ಯಗಳಿಗೆ ಮಾದರಿ, ಮಹಾಕಾವ್ಯಗಳ ಪರಂಪರೆಯನ್ನು ಪ್ರಾರಂಭಿಸುತ್ತದೆ. ಇದು 'ಪ್ರಿಮಿಟಿನ್ ಎಪಿಕ್ ಸರ್ಕಾರಿ ಹೊರವಲಯ ಮುದ್ರಣಾಲಯ ಹೌದು. ಅನಂತರ ಬರುವವು 'ಸೆರೆಂಡಾ ಎಪಿಕ್‍ಗಳು, ನಾಗರೀಕತೆಯ ಮಹಾಕಾವ್ಯಗಳು. ಇಲಿಯಡ್ ಪ್ರೈಮರಿ ಎಪಿಕ್; ಪಾಶ್ಚಾತ್ಯ ಮಹಾಕಾವ್ಯ ಪರಂಪರೆಯ ಉದ್ಘಾಟನೆಯನ್ನು ಮಾಡಿತು

ಹೋಮರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದವೂ ಇದೆ. ಗ್ರೀಕ್ ಭಾಷೆಯಲ್ಲಿ ಆ ಮಾತಿಗೆ ಸಂಗ್ರಾಹಕ ಎಂದು ಅರ್ಥ. ಆದಕಾರಣ ಹಲವರು ರಚಿಸಿದ ಕವಿತೆಗಳನ್ನು ಯಾರೋ ಸಂಗ್ರಹಿಸಿ ಸಂಪಾದಿಸಬೇಕು. ಅವನಿಗೆ ಹೋಮರ್ ಎಂಬ ಅನ್ವರ್ಥನಾಮ ಬಂದಿರಬೇಕು ಎಂದು ಕೆಲವರು ವಿದ್ವಾಂಸರು ಹೇಳುತ್ತಾರೆ. ಆದರೆ ಹೋಮರ್ ಕವಿ ತಮ್ಮವನು, ತಮ್ಮ ಮಡಿಲಲ್ಲಿ ಹುಟ್ಟಿ ಬೆಳೆದವನು ಎಂದು ಈಗಲೂ ಗ್ರೀಕ್ ಪಟ್ಟಣಗಳು ಹೇಳಿಕೊಳ್ಳುತ್ತಿದ್ದುದನ್ನೂ ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಂಡಿರಬೇಕು. ಒಬ್ಬನೇ ರಚಿಸಿರಲಿ ಅನೇಕರ ಕೈವಾಡ ಅದರಲ್ಲಿರಲಿ, ಈ ಕಾವ್ಯದಲ್ಲಿ ಎದ್ದು ಕಾಣುವ ಕಲ್ಪನೆಯ ಐಕ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇದರ ಸರಳತೆ, ನೇರವಾದ ಕಥಾನಿರೂಪಣೆ, ಯುದ್ಧ ಪ್ರಸಂಗಗಳ ವರ್ಣನೆಗಳು, ಪ್ರಾಚೀನ ಗ್ರೀಕರ ಜನಜೀವನದ ಚಿತ್ರಗಳು, ಬಗೆಬಗೆಯ ಪಾತ್ರಗಳು, ಅಲ್ಲಲ್ಲಿ ಬರುವ ತಿಳಿ ಹಾಸ್ಯ, ಮನಕರಗಿಸುವ ದೃಶ್ಯಗಳು, ಮಾನವಸ್ವಭಾವದ ಅರಿವು, ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕ್ರೋಧದ ದುಷ್ಪರಿಣಾಮದ ಸೂಚನೆ-ಇವೇ ಮೊದಲಾದ ಅಂಶಗಳಿಗೆ ಈ ಕೃತಿ ಹೆಸರಾಂತಿದೆ. ಇಲಿಯಡ್ ಕಾವ್ಯ ಗ್ರೀಕ್ ಮಹಾರುದ್ರ ನಾಟಕಗಳಿಗೆ ವಸ್ತುವನ್ನೊದಗಿಸಿತಲ್ಲದೆ ಯೂರೋಪಿನ ಸಾಹಿತ್ಯದಲ್ಲಿ ಮುಂದೆ ಬಂದ ವರ್ಜಿಲ್, ಡಾಂಟೆ, ಟ್ಯಾಸೊ, ಮಿಲ್ಟನ್ ಮೊದಲಾದ ಕವಿಗಳ ಮಹಾಕಾವ್ಯಗಳಿಗೆ ಮಾದರಿಯಾಯಿತು. ಇದರ ರೂಪಲಕ್ಷಣಗಳನೇಕವನ್ನು ಆ ಕವಿಗಳು ಅನುಕರಿಸಿದ್ದಾರೆ. ಅದರ ಛಂದಸ್ಸು ಕೂಡ (ಅಲ್ಪ ಸ್ವಲ್ಪ ಬದಲಾವಣೆಗಳೊಡನೆ) ಐರೋಪ್ಯ ಮಹಾಕಾವ್ಯಗಳ ಕವಿಪ್ರಿಯ ಛಂದಸ್ಸಾಗಿ ಉಳಿದುಬಂದಿದೆ. [][]

ಉಲ್ಲೇಖ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Homer's Iliad, Classical Technology Center.
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಇಲಿಯಡ್
"https://kn.wikipedia.org/w/index.php?title=ಇಲಿಯಡ್&oldid=1249528" ಇಂದ ಪಡೆಯಲ್ಪಟ್ಟಿದೆ